ಗೌಡ ಸಾರಸ್ವತ ಬ್ರಾಹ್ಮಣ ರ ವಲಸೆಯ ಕಥೆ (GSB- ಗಳ ಕಥೆ)

By: GSB- ಗಳ ಕಥೆ

1/14/2021 12:00:00 AM


ಗೌಡ ಸಾರಸ್ವತ ಬ್ರಾಹ್ಮಣ ರ ವಲಸೆಯ ಕಥೆ* (GSB- ಗಳ ಕಥೆ)



ಸಾವಿರಾರು ವರ್ಷಗಳ ಕೆಳಗೆ ವೇದಗಳ ಕಾಲದಲ್ಲಿ ಸರಸ್ವತೀ ನದಿ ತೀರದಲ್ಲಿ ಸಾರಸ್ವತ ಮುನಿ ತನ್ನ ನೂರಾರು ಶಿಷ್ಯ ರುಗಳೊಂದಿಗೆ ವಾಸಿಸುತ್ತಿದ್ದ. (ಸರಸ್ವತೀ ನದಿ ಬಂಗಾಲದ ಹೂಗ್ಲಿ ನದಿಯ ಉಪನದಿ). ಮಳೆಯ ಕೊರತೆಯಿಂದ ಸರಸ್ವತಿ ನದಿ ಬತ್ತುತ್ತಾ ಬಂತು. ಬರಗಾಲ ತಲೆ ದೋರಿತು. ಅಹಾರದ ಕೊರತೆ ಉಂಟಾಗ ತೊಡಗಿತು.
ಸಾರಸ್ವತ ಮುನಿಗೆ ತುಂಬಾ ಆತಂಕ ಉಂಟಾಯಿತು. ತನಗೋ ವಯಸ್ಸಾಯಿತು. ತನ್ನಲ್ಲಿ ವೇದಾಧ್ಯಯನ ಮಾಡುತ್ತಿದ್ದ ಶಿಷ್ಯರು ಆಹಾರದ ಕೊರತೆ ಎದುರಿಸುತ್ತಿದ್ದಾರೆ, ಅವರಿಗೇನಾದರೂ ಅದರೆ ಅವರು ತನ್ನಿಂದ ಪಡೆದ ವೇದ ಜ್ಞಾನ ದ ಭಂಡಾರ ಕೂಡಾ ಅವರೊಡನೆಯೆ ನಶಿಸಿ ಹೋದೀತು, ವೈದಿಕ ಧರ್ಮ ನಾಶವಾದೀತು ಎಂಬ ಚಿಂತೆ ಅವನನ್ನು ಕಾಡ ತೊಡಗಿತು.
ಆ ಆಲೋಚನೆ ಯಲ್ಲಿ ರುವಾಗಲೇ ನದಿ ತಳದಲ್ಲಿ ಸಮೃದ್ಧವಾಗಿದ್ದ ಮತ್ಸ್ಯ ಸಮೂಹ ಆತನ ಕಣ್ಣಿಗೆ ಬಿತ್ತು. ಒಂದು ಉಪಾಯ ಹೊಳೆಯಿತು. ಕೂಡಲೇ ಅತ ತನ್ನ ಕೆಲ ಶಿಷ್ಯರನ್ನು ಕರೆದು, ಶಿಷ್ಯರೇ, ನದಿಯಲ್ಲಿ ರುವ ಮೀನುಗಳ ಕಡೆ ನೋಡಿ, ನದಿಯ ನೀರು ಬತ್ತುತ್ತಿದೆ, ಅದರಲ್ಲಿರುವ ಮೀನುಗಳೇ ಈಗ ನಿಮ್ಮ "ಜೀವನಾಧಾರ" ಅವುಗಳ ಬಾಲ ಮತ್ತು ತಲೆಯನ್ನು ಬೇರ್ಪಡಿಸಿ ಅವು ಗಳನ್ನು ಆಹಾರವನ್ನಾಗಿ ಬಳಸುವುದೊಂದೇ ಜೀವ ಉಳಿಸಿ ಕೊಳ್ಳಲು ಈಗಿರುವ ಉಪಾಯ ಎಂದನು.
ಬೇರೆ ಗತಿಇಲ್ಲದೆ ಗುರುವಿನ ಮಾತನ್ನು ಒಪ್ಪಿದ ಶಿಷ್ಯರು ಮನಸ್ಸಿಲ್ಲದ ಮನಸ್ಸಿನಿಂದ ಮತ್ಸ್ಯಾಹಾರವನ್ನು ಒಪ್ಪಿಕೊಳ್ಳುವ ಪರಿಸ್ಥಿತಿ ಬಂತು.
ಆದರೆ ಕ್ರಮೇಣ ಬರಗಾಲದ ಭೀಕರತೆ ಹೆಚ್ಚುತ್ತಿದ್ದಂತೆ ಅವರು ಗುಂಪು ಗುಂಪಾಗಿ
ಬೇರೆ ಬೇರೆ ಕಡೆ ವಲಸೆ ಹೋಗಲೇ ಬೇಕಾಯಿತು. ಗೌಡದೇಶ (ಈಗಿನ ಬಂಗಾಳ) ದ ಕಡೆಯಿಂದ ಪಶ್ಚಿಮ‌ ಕರಾವಳಿಯ ಕಡೆ ವಲಸೆ ಬಂದ ಸಾರಸ್ವತ ಮುನಿಯ ಶಿಷ್ಯ ವೃಂದಕ್ಕೆ "ಗೌಡ ಸಾರಸ್ವತ ಬ್ರಾಹ್ಮಣರು" ಎಂಬುದಾಗಿ ಹೆಸರು ಬಂತು ಎಂಬುದಾಗಿ ಸಾರಸ್ವತರ ಇತಿಹಾಸ ಹೇಳುತ್ತದೆ.
ದೊಡ್ಡ ಸಂಖ್ಯೆಯ ಲ್ಲಿದ್ದ ಗೌಡ ಸಾರಸ್ವತ ರು ತಾವು ನೆಲೆಸಲು ಅನುಕೂಲಕರವಾದ ತಾಣಗಳನ್ನು ಹುಡುಕುತ್ತಾ, ಪದೇ ಪದೇ ತಮ್ಮ ನೆಲೆಗಳನ್ನು ಬದಲಿಸುತ್ತಾ ಬಹುದೂರ
ವಲಸೆ ಹೋಗಬೇಕಾಯಿತು.
ಕೊನೆಗೆ ಅವರಲ್ಲಿಯ ಹೆಚ್ಚಿನ ಸಮೂಹಗಳು
ಗೋಮಾಂತಕದ ಕಡಲ ತೀರದಲ್ಲಿದ್ದ ದ್ವೀಪಗಳಲ್ಲಿ ಬಂದು ನೆಲಸಿದರು.
ಅಲ್ಲಿಯ ವಿಶಾಲವಾದ ಬಯಲು ಪ್ರದೇಶ ಗಳಲ್ಲಿ ತಮ್ಮ ಗ್ರಾಮಗಳನ್ನು ಕಟ್ಟಿಕೊಂಡು, ಬೇಸಾಯ ಮತ್ತು ಇನ್ನಿತರ ವೃತ್ತಿಗಳನ್ನು ಕೈಗೊಂಡು, ದೇವಸ್ಥಾನ ಗಳನ್ನು ಸ್ಥಾಪಿಸಿ ಕೊಂಡು, ತಮ್ಮ ವೈದಿಕ ಸಂಸ್ಕೃತಿಯನ್ನು ಉಳಿಸಿಕೊಂಡು ಅಲ್ಲಿಯ ನೆಲದಲ್ಲಿ ಬೆರೆತು ಹೋದರು. ಸಾವಿರಾರು ವರ್ಷಗಳ ಕಾಲ ಅಲ್ಲಿಯೇ ಬದುಕಿ ಬಾಳಿದರು.
ಹದಿನೈದನೇ ಶತಮಾನದಲ್ಲಿ ಪೋರ್ಚುಗೀಸರು ತಮ್ಮ ಹಡಗುಗಳಲ್ಲಿ‌ ಗೋವಾಕ್ಕೆ ಬಂದಿಳಿದರು.
ಗದ್ದೆ ತೋಟಗಳಿಂದ ಕಂಗೊಳಿಸುವ ಶಾಂತಿಯುತವಾದ ಗ್ರಾಮಗಳು, ಉಲ್ಲಾಸದಿಂದ ಓಡಾಡುವ ಸ್ತ್ರೀ ಪುರುಷರು, ಸುಂದರವಾದ ದೇವಸ್ಥಾನಗಳು, ಗರ್ಭಗುಡಿಯಲ್ಲಿರುವ ದೇವರ ಹೊಳೆವ ಆಭರಣಗಳು ಇವುಗಳನ್ನು ನೋಡಿ ಪೋರ್ಚುಗೀಸ್ ನಾವಿಕರಲ್ಲಿಯ ಕಡಲ್ಗಳ್ಳರ ಸ್ವಭಾವ ಮತ್ತು ದುರಾಸೆಗಳು ಜಾಗ್ರತವಾದವು. ಸಂಪತ್ತಿನ ಆಸೆಯೊಡನೆ ಮತಾಂಧತೆಯ ಅಮಲೂ ಸೇರಿಕೊಂಡಿತು.



ನಿಧಾನವಾಗಿ ಅವರು ಗೋವಾದ ಹಲವು ದ್ವೀಪಗಳನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡುಬಿಟ್ಟರು. ತಮ್ಮಷ್ಟಕ್ಕೆ ತಾವು ಶಾಂತಿಯಿಂದ ಬಾಳುತ್ತಿದ್ದ ಸರಳ ಸ್ವಭಾವದ ಜನ ಈ ಕಡಲ್ಗಳ್ಳರ ಸ್ವಭಾವದ, ಕುಯುಕ್ತಿಯ ಜನರ ಕ್ರೌರ್ಯವನ್ನು ಎದುರಿಸಲಾರದೆ ಹೋದರು.
ಪೋರ್ಚುಗೀಸರು ತಾವು ಸ್ವಾಧೀನಕ್ಕೆ ಪಡೆದುಕೊಂಡ ಊರುಗಳಲ್ಲಿ ಹಿಂದೂಗಳ ಅದರಲ್ಲೂ ಪ್ರಮುಖವಾಗಿ ಅಲ್ಲಿಯ ಸಾರಸ್ವತ ಬ್ರಾಹ್ಮಣರ ಸಂಪತ್ತನ್ನು ದೋಚಿ ಅವರನ್ನು ಮತಾಂತರಿಸುವ ಕಾರ್ಯ ಶುರು ಮಾಡಿದರು.
ಸಾರಸ್ವತರ ಕಷ್ಟ ಪರಂಪರೆಗಳು ಮತ್ತೆ ಪ್ರಾರಂಭವಾದವು. ಪೋರ್ಚುಗೀಸರು ಆರ್ಥಿಕವಾಗಿ ಸಬಲರಾದ ಶಿಕ್ಷಿತ ವರ್ಗವನ್ನು , ದೇವಸ್ಥಾನ ದ ಪುರೋಹಿತ ಹಿನ್ನಲೆಯಿರುವ ಸಾರಸ್ವತ ರನ್ನು, ಹಿಂಸಿಸಿ ಬೆದರಿಸಿ ಬಲಾತ್ಕಾರದಿಂದ ಅವರನ್ನು ಮೊದಲಿಗೆ ಮತಾಂತರ ಮಾಡುವ ಕೆಲಸವನ್ನು ಆರಂಭಿಸಿದರು. ತಮ್ಮ ದೇಶದಿಂದ ಪಾದರಿಗಳನ್ನು ಕರೆಸಿಕೊಂಡರು, ಅವರ ಮುಂದಾಳುತ್ವದಲ್ಲಿ ಬಲಾತ್ಕಾರದಿಂದ ಮತಾಂತರ ಗಳನ್ನು ಮಾಡಿದರು, ಮತಾಂತರಿಗಳು ತಮ್ಮ ಹಳೆಯ ಧರ್ಮದ ಯಾವೊಂದು ಆಚರಣೆಯನ್ನೂ ಮಾಡದಂತೆ ಅವರನ್ನು ಹದ್ದಿನ ಕಣ್ಣಿನಿಂದ ಕಾದರು, ಜೊತೆಗೆ ಅವರು ಕಟ್ಟಾ ಕ್ರಿಶ್ಚಿಯನ್ ಆಗಿ ಬದಲಾಗುವ‌ ತನಕ ಅವರನ್ನು ಹದ್ದು ಬಸ್ತಿನಲ್ಲಿ ಇಡುವ ಕೆಲಸ ಮಾಡಿದರು.
ಅ ಪ್ರದೇಶದ ಜನ ಸೀರೆ ಪಂಚೆ ಮುಂತಾದ ಉಡುಪುಗಳನ್ನು ತ್ಯಜಿಸಿವುದರಿಂದ ಹಿಡಿದು ಮನೆಯ ಹಿತ್ತಲಲ್ಲಿ‌ ವೀಳೆಯದೆಲೆ ತುಳಸೀಗಿಡಗಳನ್ನು ಕೂಡಾ ಬೆಳೆಸದಂತೆ ನಿರ್ಬಂಧಿಸುವ ಕೆಲಸ ಮಾಡಿದರು.


ಅವರು ವಿಧಿಸಿದ 58 ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಿದ್ದು ಮಾತ್ರವಲ್ಲ ಆ ಕುಕೃತ್ಯಗಳನ್ನು ದೊಡ್ಡ ಸಾಧನೆಗಳಂತೆ "The great Goan Inquisition" ಎಂದು ಪೋರ್ಚುಗೀಸ್ ಅಡಳಿತ ಮಾಡಿದ ದಾಖಲೆಗಳು ಇಂದಿಗೂ ಲಭ್ಯ ವಿವೆ. ಅನೇಕ ಸಾರಸ್ವತ ರ ಪುಸ್ತಕ ಗಳಲ್ಲಿ ಅವುಗಳ ಉಲ್ಲೇಖವಿದೆ.
ಒಂದೆರಡು ವರ್ಷಗಳ ಕೆಳಗೆ ಅಲ್ಲಿಯ ಚರ್ಚುಗಳಲ್ಲಿ ಈ "Inquisitions" ಗಳ ನಾಲ್ಕನೇ ಶತಮಾನಗಳ ಆಚರಣೆ ಯನ್ನು ವೈಭವದಲ್ಲಿ ಮಾಡಿದ ಬಗ್ಗೆ ವಿವರಗಳು ಪೇಪರಿನಲ್ಲಿ ಬಂದಿದ್ದವು.
ಅಂದರೆ ಗೋವಾದ ಜನರ ಮೇಲೆ ಆದ ದೌರ್ಜನ್ಯ ದ ಸಂಭ್ರಮಾಚರಣೆ!! ಮತ್ತು ಈ ಸಂಭ್ರಮ ಆಚರಣೆಯನ್ನು ಮಾಡಿದ್ದು ದೌರ್ಜನ್ಯ ಕ್ಕೊಳಗಾದ ಜನರ ಪೀಳಿಗೆಯವರು.
ಪೋರ್ಚುಗೀಸರ ಒತ್ತಡಗಳು, ಬೆದರಿಕೆ ಬಲಾತ್ಕಾರ ಗಳು, ಅತ್ಯಾಚಾರ ಗಳು, ಹಿಂಸೆ ಚಿತ್ರ ಹಿಂಸೆಗಳು ಮುಂತಾದ ದೌರ್ಜನ್ಯ ಗಳನ್ನು ಎದುರಿಸಲಾರದೆ ಸಾವಿರಾರು ಸಾರಸ್ವತರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಪ್ರತಿಭಟಿಸಿದ ನೂರಾರು ಜನ ಕೊಲ್ಲಲ್ಪಟ್ಟರು.
ಸಾವಿರಾರು ವರ್ಷಗಳಿಂದ ಗೋಮಾಂತಕದ ದ್ವೀಪಗಳಲ್ಲಿ ಶಾಂತಿಯಿಂದ ನೆಲೆಸಿದ್ದ ಸಾರಸ್ವತ ಬ್ರಾಹ್ಮಣ ರ ಜೀವನ ನರಕ ಸದೃಶವಾಗಿ ಹೋಯಿತು. ಅವರ ಅಸ್ತಿಪಾಸ್ತಿಗಳು ಪೋರ್ಚುಗೀಸರ ಪಾಲಾದವು. ಅವರ ಮಕ್ಕಳ ಅಪಹರಣ ನಡೆಯಿತು, ಅವರ ದೇವಸ್ಥಾನ ಗಳು ನೆಲ ಸಮವಾದವು, ದೇವರ ಮೂರ್ತಿಗಳು ಭಗ್ನವಾದವು, ದೇವಸ್ಥಾನ ಗಳ ಆಸ್ತಿ ಅವರ ಸೊತ್ತಾಯಿತು. ದೇವರುಗಳ ಸಂಪತ್ತು ಅವರ ಪಾಲಾಯಿತು.


"ಗೋಮಾಂತಕ"


ಕ್ರಿಶ್ಚಿಯನ್ ರ "ಗೋವಾ" ಅಗಿ ಬದಲಾಗಿ ಹೋಯಿತು.
ಕೆಲವು ಸಾರಸ್ವತ ಕುಟುಂಬಗಳು‌ ತಮ್ಮ ಮೇಲೆ ಎರಗಿದ ವಿಪತ್ತುಗಳಿಂದ ತಪ್ಪಿಸಿಕೊಳ್ಳಲೋಸುಗ ಗೋವಾದಿಂದಲೇ ಪರಾರಿಯಾಗುವ ಯೋಜನೆಗಳನ್ನು ರೂಪಿಸಿದವು.
ತಮ್ಮ ಅಸ್ತಿ ಪಾಸ್ತಿ, ವ್ಯಾಪಾರ ಉದ್ಯೋಗ, ಮನೆ ಮಠಗಳನ್ನು ಬಿಟ್ಟು ತಾವು ನಂಬಿದ ಮನೆ ದೇವರುಗಳನ್ನು ತಲೆಯ ಮೇಲೆ ಹೊತ್ತುಕೊಂಡು ತಾವು ಹುಟ್ಟಿ ಬೆಳೆದ ಊರುಗಳನ್ನೇ ಬಿಟ್ಟು ಗುಂಪು ಗುಂಪಾಗಿ‌ ವಲಸೆ ಹೊರಟು ಬಿಟ್ಟರು.
ಕೆಲವು ಗುಂಪುಗಳು ದೊಡ್ಡ ದೊಡ್ಡ ನಾವೆಗಳಲ್ಲಿ, ಕೆಲವು ಕುಟುಂಬಗಳು ಅರಣ್ಯದಂಚುಗಳಲ್ಲಿ ನಡಿಗೆಯ ಮೂಲಕ , ಕಿಮೀ ಗಟ್ಟಲೆ ದೂರವನ್ನು ಕ್ರಮಿಸಿ ಕರ್ನಾಟಕದ ಕರಾವಳಿ ಯತ್ತ ಪಯಣ ಬೆಳೆಸಿದವು.‌
ಈ ಸುದೀರ್ಘ ಪಯಣದಲ್ಲಿ
ಅದ ಜೀವಹಾನಿ ಮಾನ ಹಾನಿಗಳೆಷ್ಟೋ, ಎದುರಾದ ಗಂಡಾತರ ಗಳೆಷ್ಟೋ, ಸತ್ತವರೆಷ್ಟೋ ಬದುಕಿದವರೆಷ್ಟೋ, ಅನುಭವಿಸಿದ ಯಾತನೆಗಳೆಷ್ಟೋ ಲೆಕ್ಕವಿಟ್ಟವರಾರು?
ಅಂತೂ ಇಂತೂ ಕೆಲವು ಕುಟುಂಬಗಳು ಕರ್ನಾಟಕದ ಕರಾವಳಿ ತಲುಪಿದವು. ಇನ್ನೂ ಕೆಲವು ಕುಟುಂಬಗಳು ತಮ್ಮ ಪಯಣವನ್ನು ಮುಂದುವರೆಸಿ ಕೇರಳದ ಕೊಚ್ಚಿಯನ್ನು ತಲುಪಿದವು. ಹೀಗೆ ಗೌ.ಸಾ. ಬ್ರಾಹ್ಮಣ ಕುಟುಂಬಗಳು ಕಾರವಾರದಿಂದ
ಕೊಚ್ಚಿಯ ತನಕದ ಕಡಲ ತಟದ ವಿವಿಧ ಊರುಗಳಲ್ಲಿ ನೆಲೆಯೂರಿದವು.
ಗೋವಾದಿಂದ ದೂರದ ಊರುಗಳಿಗೆ ಹೋಗಲಾರದ ಅನೇಕ ಸಾರಸ್ವತ ರು ತಮ್ಮ ಧರ್ಮ ಮತ್ತು ದೇವರುಗಳನ್ನು ಉಳಿಸಲು ಹರಸಾಹಸ ಪಟ್ಟರು.
ತಮ್ಮ ದೇವರ ವಿಗ್ರಹಗಳನ್ನು ಹುಲ್ಲಿನ ಮೆದೆಗಳಲ್ಲಿ, ಬಾವಿಗಳಲ್ಲಿ, ನೆಲದಡಿಯ ಹೊಂಡಗಳಲ್ಲಿ ಬಚ್ಚಿಟ್ಟರು.
ಸಮಯ ನೋಡಿ ಅಂಗೈಯಲ್ಲಿ ಜೀವ ಹಿಡಿದು, ತಮ್ಮ ದೇವರ ಮೂರ್ತಿಗಳೊಂದಿಗೆ ಸಮೀಪದ ಆದಿಲ್ ಶಾಹಿ ಅಥವಾ ಕದಂಬರ ಆಡಳಿತವಿದ್ದ ಊರುಗಳಿಗೆ ಪಲಾಯನ ಗೈದು ಬಿಟ್ಟರು.
ಅಲ್ಲಿಯೆ ನೆಲೆ ನಿಂತು ತಮ್ಮ ಪೂಜಾ ಸ್ಥಳಗಳನ್ನು ನಿರ್ಮಿಸಿದರು.
ಇಂದಿಗೂ "ಜಿ ಎಸ್ ಬಿ" ಗಳ ಕುಲ ದೇವಸ್ಥಾನ ಗಳಲ್ಲಿ ಹೆಚ್ಚಿನವು ಗೋವಾದ ಪೊಂಡಾ ತಾಲ್ಲೂಕಿನಲ್ಲಿ ಕೇಂದ್ರೀಕೃತ ವಾಗಿವೆ. ಇನ್ನು ಕೆಲವು ದಟ್ಟ ಅರಣ್ಯದ ನಡುವೆ ಮರೆಯಾಗಿ ನಿಂತಿವೆ.
ಪೋರ್ಚುಗೀಸರ ದೌರ್ಜನ್ಯ ಗಳನ್ನು ಎದುರಿಸಿಯೂ ಬಹು ಕಷ್ಟದಿಂದ ಗೋವಾದಲ್ಲಿ ತಮ್ಮ ದೇವಳಗಳನ್ನು ಉಳಿಸಿಕೊಂಡ ಜನರ ಧೈರ್ಯ, ತ್ಯಾಗ ಮತ್ತು ಬಲಿದಾನಗಳನ್ನು ಇಡೀ
ಜಿ ಎಸ್ ಬಿ ಸಮುದಾಯ ಕೃತಜ್ಞತೆ ಯಿಂದ ನೆನೆಯಬೇಕಿದೆ. ಅವರಿಂದಾಗಿ ನಮ್ಮಕುಲ ದೇವತೆಗಳ ದೇವಾಲಯ ಗಳು ಇಂದು ಗೋವಾದಲ್ಲಿ ಬಹಳ ವೈಭವದಿಂದ ತಲೆ ಎತ್ತಿ ನಿಂತಿವೆ.
ಈ ನಡುವೆ ಕರ್ನಾಟಕ ಮತ್ತು ಕೊಚ್ಚಿಯ ಕರಾವಳಿಗೆ ಬಂದಿಳಿದ ಸಾರಸ್ವತ ಬ್ರಾಹ್ಮಣ ರ ಕೆಲವು ಕುಟುಂಬಗಳು ಸಸ್ಯಾಹಾರಿ ಗಳಾಗಿಯೇ ಉಳಿದಿದ್ದರೆ ಇನ್ನು ಕೆಲವು ಕುಟುಂಬಗಳು ಮತ್ಸ್ಯಾಹಾರಿಗಳಾಗಿ ಬದಲಾಗಿ ಬಿಟ್ಟಿದ್ದವು.‌


ಮತ್ಸ್ಯಾಹಾರ ದ ಪರಂಪರೆ ಉಳ್ಳವರು ಬ್ರಾಹ್ಮಣ" ರೇ ಅಲ್ಲ ಎಂದು ಸ್ಥಳೀಯ ಬ್ರಾಹ್ಮಣ ಸಮುದಾಯ ಅವರನ್ನು ಬದಿಗಿರಿಸಿತು. ಇದರಿಂದೇನೂ ಜಿಎಸ್ ಬಿಗಳು ಬೇಸರಿಸಲೂ ಇಲ್ಲ, ನೊಂದುಕೊಳ್ಳಲೂ ಇಲ್ಲ.
ತಮ್ಮ ಧರ್ಮ ಮತ್ತು ದೇವರುಗಳ ಉಳಿವಿಗಾಗಿ ಗಾಗಿ ತಾವು ಅನುಭವಿಸಿದ ಕಷ್ಟ ಪರಂಪರೆ ಗಳು ಅವರಿಗೆ ಜೀವನದ ಪಾಠವನ್ನು ಕಲಿಸಿದ್ದವು..
ತಮಗೆ ಅಶ್ರಯ ಕೊಟ್ಟ ನೆಲದ ಜನರೊಂದಿಗೆ ಅವರು ವಾದ ವಿವಾದಗಳಿಗೆ, ಸಂಘರ್ಷಗಳಿಗೆ ಇಳಿಯಲಿಲ್ಲ.
ಬದಲಾಗಿ ತಮ್ಮಷ್ಟಕ್ಕೆ ತಮ್ಮನ್ನು ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡರು. ದೇವರಿತ್ತ ವಿದ್ಯೆ ಬುದ್ದಿ ಗಳ ಉಪಯೋಗವನ್ನು ಮಾಡಿಕೊಂಡರು. ದುಡಿಮೆಯೇ ದೇವರು ಎಂಬಂತೆ ದುಡಿದರು. ದುಡಿಮೆಯ ಸಣ್ಣ ಭಾಗವನ್ನು ತಮ್ಮ ದೇವರು ಮತ್ತು ಗುರುಗಳಿಗೆ ನೀಡಿದರು.
ಯಾವ ದೇವರುಗಳನ್ನು ಹೊತ್ತು ತಮ್ಮಪೂರ್ವಜರ ನಾಡನ್ನು ತೊರೆದು ಬಂದಿದ್ದರೋ ಆ ದೇವತೆಗಳಿಗಾಗಿ ದೇವಸ್ಥಾನಗಳನ್ನು ಸ್ಥಾಪಿಸಿ ಅವುಗಳನ್ನು ಅಭಿವೃದ್ಧಿಗೊಳಿಸಿದರು. ತಮ್ಮ ತಮ್ಮ‌ ಮನೆಗಳಲ್ಲಿ‌ ತಮ್ಮ ಆಚಾರ ವಿಚಾರಗಳನ್ನು‌ಅನುಸರಿಸಿ ಜೀವನ ಸಾಗಿಸಿದರು.
ಕುಲ ದೇವತೆಗಳಿಲ್ಲದ ಕಡೆ ಆರಾಧನೆಗಾಗಿ ವೆಂಕಟರಮಣ ದೇವಸ್ಥಾನ ಅಥವಾ ರಾಮ ಮಂದಿರ ಗಳನ್ನು ನಿರ್ಮಿಸಿ ಕೊಂಡರು. ತಮ್ಮದೇ ವೈದಿಕ ಪರಂಪರೆಯ ನ್ನು ಬೆಳೆಸಿದರು. ದೇವಸ್ಥಾನಗಳಲ್ಲಿ ತಮ್ಮದೇ ಪುರೋಹಿತರು ಗಳನ್ನು ನೇಮಿಸಿಕೊಂಡು ತಮ್ಮ ಪೂಜಾ ಕೈಂಕರ್ಯ ಗಳು, ಧಾರ್ಮಿಕ ವಿಧಿಗಳು ಉತ್ಸವಗಳು ಕ್ರಮ ಬದ್ಧವಾಗಿ ನಡೆಯುವಂತೆ ನೋಡಿ ಕೊಂಡರು. ತಮ್ಮದೇ ಮಠಗಳನ್ನು ಭಾರತದಾದ್ಯಂತ ವಿವಿಧ ಪುಣ್ಯ ಕ್ಷೇತ್ರಗಳಲ್ಲಿ ನಿರ್ಮಿಸಿಕೊಂಡರು.
ತಮ್ಮದೇ ಗುರು ಪರಂಪರೆಯ ಮಾರ್ಗದರ್ಶನದಲ್ಲಿ ಜಿಎಸ್ ಬಿ ಸಮಾಜದ ಬೆಳವಣಿಗೆಯಾಗುವಂತೆ ನೋಡಿಕೊಂಡರು. ದೇವಸ್ಥಾನ ಗಳ ಉತ್ಸವಗಳ ಮೂಲಕ ಸಮುದಾಯದ ಜನರಲ್ಲಿ ಉತ್ಸಾಹದ, ಒಗ್ಗಟ್ಟಿನ ಮನೋಭಾವವನ್ನು ಜಾಗೃತ ಗೊಳಿಸುವ ಕಾಯಕ ಸದಾ ನಡೆಯುತ್ತಲೇ ಇರುವಂತೆ ನೋಡಿಕೊಂಡರು.
ಕುಂದಾಪುರ ದಿಂದ ಉಡುಪಿಗೆ ಹೋಗುವ ಮಾರ್ಗದ ಲ್ಲಿ ಬ್ರಹ್ಮಾವರದ ತಿರುವಿನಲ್ಲಿ ಕೆಲವು ಕಿಮೀ ಒಳಗೆ ಪಯಣಿಸಿದರೆ 'ಹಾರಾಡಿ' ಎಂಬ ಗ್ರಾಮವಿದೆ. ಆ ಗ್ರಾಮ ದಲ್ಲಿ ನನ್ನ ತಂದೆಯ ಪೂರ್ವಜರು ಗೋವಾದಿಂದ ಬಂದು ನೆಲೆಸಿದರಂತೆ. ನೂರಾರು ವರ್ಷಗಳ ಕೆಳಗೆ‌ ಅವರು ಕಟ್ಟಿಕೊಂಡ "ವರದ ವೆಂಕಟರಮಣ" ದೇವಸ್ಥಾನ ಕ್ಕೆ ನಾನು ಅಗಾಗ್ಗೆ ಭೇಟಿ ನೀಡುವುದಿದೆ.
ಗೋವಾ ಎಂದೊಡನೆ ಬೇರೆಯವರಿಗೆ ಅಲ್ಲಿಯ ಸುಂದರ ಕಡಲ ತೀರಗಳು ನೆನಪಾಗುತ್ತವೆ, ಪ್ರವಾಸಿ ತಾಣಗಳು, ಫೆನ್ನಿ, ಪಾನ ಕೇಂದ್ರ ಗಳು, ಆಮೋದ ಪ್ರಮೋದಗಳು ನೆನಪಾಗುತ್ತವೆ.
ಆದರೆ 'ಕೊಂಕಣಿಗರು' ಎಂದು ಗುರುತಿಸಲ್ಪಡುವ 'ಜಿ ಎಸ್ ಬಿ' ಗಳಿಗೆ 'ಗೋವಾ' ಎಂದರೆ ನೆನಪಾಗುವುದು ಗೋವಾದಲ್ಲಿರುವ ಅವರ ಮೂಲ ಕುಲ ದೇವಸ್ಥಾನಗಳು.
ಪ್ರತಿ ಒಬ್ಬ ಜಿ ಎಸ್ ಬಿ ತನ್ನ ಜೀವಮಾನದಲ್ಲಿ ಒಂದು ಬಾರಿ ಯಾದರೂ ತನ್ನ ಕುಟುಂಬದವರೊಂದಿಗೆ ಗೋವಾದ ಕುಲ ದೇವಸ್ಥಾನಕ್ಕೆ ಭೇಟಿ ಕೊಟ್ಟು ತನ್ನ ಕುಟುಂಬದ ಕುಲದೇವತೆಗೆ ಕೈ ಮುಗಿದು "ದೇವರೇ ನಮ್ಮನ್ನು ಕಾಪಾಡು" ಎಂದು ಬೇಡಿಕೊಂಡು ಬರಬೇಕು ಎನ್ನುವ ಅಲಿಖಿತ ನಿಯಮ ಶತಮಾನಗಳಿಂದ ಜಾರಿಯಲ್ಲಿದೆ ಮತ್ತು ಹೆಚ್ಚಿನ ಜನ ಅದನ್ನು ಒಂದು ನಿಯಮದಂತೆ ಪಾಲಿಸುತ್ತಾರೆ ಕೂಡಾ.

Likes: 10